Friday, April 29, 2011

ವ್ಯಾಘ್ರಹತ್ಯೆಯ ನಿಗೂಢಗಳು...24: ಕ್ರಿಮಿನಾಲಿಟಿಯ ವ್ಯಾಖ್ಯಾನದಲ್ಲಿ ಹರಕೆಯ ಕುರಿಗಳು


ನವದೆಹಲಿ, ಜನವರಿ 6. ವನ್ಯಜೀವಿ ಪ್ರಾಧಿ ಕಾರದ ಅಧಿಕಾರಿಗಳು ದೇಶದ ವನ್ಯಜೀವಿಗಳ ಉಳಿವಿಗೆ ‘ಪರ್ದಿ’ ಆದಿವಾಸಿಗಳು ‘ನಂಬರ್ ಒನ್’ ಅಪಾಯಕಾರಿ ಗಳು ಎಂದು ತಿಳಿಸಿದ್ದಾರೆೆ. ಕೆಲವು ದಿನಗಳ ಹಿಂದೆ ಗಿರ್ ಸಿಂಹಧಾಮದಲ್ಲಿ ಎಂಟು ಸಿಂಹಗಳು ಕಳ್ಳ ಶಿಕಾರಿಯಿಂದ ಸಾವಿಗೀಡಾಗಿದ್ದವು. ಈ ಸಾವುಗಳ ಬಗ್ಗೆ ತುಂಬಾ ತಡವಾಗಿ ವಿಚಾರ ತಿಳಿದ ಪ್ರಾಧಿಕಾರದ ಮುಖ್ಯಸ್ಥರು ಈ ಬಗ್ಗೆ ಮಾತನಾಡುತ್ತಿದ್ದರು. ಭಾರತದಲ್ಲಿ ಸಿಂಹಗಳು ತೀರಾ ಅಪಾಯದಲ್ಲಿರುವ ಪ್ರಾಣಿಗಳು. ಈ ಪರ್ದಿಗಳು ತುಂಬಾ ಪರಿಣಿತ ಬೇಟೆಗಾರರು. ಇವರಿಂದ ಸಿಂಹ ಗಳಿಗೆ ತುಂಬಾ ಅಪಾಯವಿದೆ ಎಂದು ವೈಲ್ಡ್ ಲೈಫ್ ಸೊಸೈಟಿ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕಿ ಬಿಲಿಂದ ರೈಟ್ ತಿಳಿಸಿದರು.‘
‘ಇವರಿಂದಾಗಿ ಗಿರ್ ಅರಣ್ಯದ ಸಿಂಹಗಳು ಮಾತ್ರವಲ್ಲ ಇದರ ನೆರೆ ರಾಜ್ಯವಾದ ಮಧ್ಯ ಪ್ರದೇಶದ ಕಾಡುಗಳಲ್ಲಿ ರುವ ಹುಲಿಗಳು ಸಹ ಸುರಕ್ಷಿತವಲ್ಲ. ಇವರು ತುಂಬಾ ನುರಿತ, ಸಾಂಪ್ರ ದಾಯಿಕ ಬೇಟೆಗಾರರು. ಇವರ ವಿರುದ್ಧ ರಾಜ್ಯ ದಲ್ಲಿ ನೂರಾರು ವನ್ಯಜೀವಿ ಹತ್ಯೆಯ ಮೊಕದ್ದಮೆಗಳು ದಾಖಲಾಗಿವೆ’’ ಎಂದು ಮಧ್ಯ ಪ್ರದೇಶದ ಹೆಚ್ಚು ವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಎಸ್.ಪಾಬ್ಲಾ ತಿಳಿಸಿದರು.ವನ್ಯಜೀವಿ ತಜ್ಞರ ಪ್ರಕಾರ, ಈ ಪರ್ದಿಗಳು ವರ್ಷವೊಂದರಲ್ಲಿ ನೂರಾರು ಹುಲಿಗಳನ್ನು ಕೊಲ್ಲುತ್ತಾರೆ. ಇವರು ಇಲ್ಲಿ ಮಾತ್ರವಲ್ಲ ದೇಶದ ತುಂಬಾ ಕ್ರಿಯಾಶೀಲವಾಗಿದ್ದಾರೆ. ಇವರ ಬಗ್ಗೆ ಶಿಕಾರಿ ನಿರೋಧಕ ದಳದಲ್ಲಾಗಲಿ, ಅರಣ್ಯ ಇಲಾಖೆಯಲ್ಲಾಗಲಿ, ಪೊಲೀಸರಲ್ಲಾಗಲಿ ಅಥವಾ ಸ್ವಯಂಸೇವಾ ಸಂಸ್ಥೆಗಳ ಬಳಿಯಲ್ಲಾಗಲಿ ಹೆಚ್ಚಿನ ಮಾಹಿತಿಗಳಿಲ್ಲ ಎಂದು ಮಾಹಿತಿ ನೀಡಿದ ರೈಟ್ ,ಹುಲಿಗಳಾದರೋ ದೇಶದ ಅನೇಕ ಕಾಡುಗಳಲ್ಲಿವೆ. ಆದರೆ ಸಿಂಹಗಳಿರುವುದು ಈ ಗಿರ್ ಅರಣ್ಯದಲ್ಲಿ ಮಾತ್ರ, ಇದೊಂದೇ ಅವುಗಳ ನೈಸರ್ಗಿಕ ಆವಾಸ, ಎಂದು ಆತಂಕ ವ್ಯಕ್ತಪಡಿಸಿದರು.
ಪರ್ದಿಗಳು ಮಾಡಿದ ಸಿಂಹಗಳ ಹತ್ಯೆಯ ರೀತಿಯನ್ನು ವಿವರಿಸಿದ ರೈಟ್, ಮಧ್ಯಾಹ್ನದಲ್ಲಿ ನಾಲ್ಕು ಟ್ರಾಪ್‌ಗಳನ್ನಿಟ್ಟು ಸಂಜೆಗೆ ಮೂರು ಸಿಂಹಗಳನ್ನು ಕೊಂದಿದ್ದಾರೆ ಎಂದು ಹೇಳಿದರು.‘‘ಪರ್ದಿಗಳು ಬುಡಕಟ್ಟು ಜನಾಂಗದ ಉಪ ಪಂಗಡ, ಇವರನ್ನು 1871ರಲ್ಲಿ ‘ಕ್ರಿಮಿನಲ್ ಟ್ರೈಬ್’ ಎಂದು ಹೆಸರಿಸಲಾಗಿತ್ತು. 1952ರಲ್ಲಿ ಇದನ್ನು ಡೀನೋಟಿಫೈ ಮಾಡಿ, ಅಲೆಮಾರಿ ಬುಡಕಟ್ಟುಗಳು ಎಂದು ಹೆಸರಿಸಲಾ ಯಿತು’’ ಎಂದು ಹೇಳಿದರು‘‘ಈ ಪರ್ದಿಗಳು ಸದ್ಯಕ್ಕೆ ರೀಥಿ ಅರಣ್ಯ ವಲಯ, ವಿಮಲ್‌ಖೇರಿ, ಬರ್ಹಿ, ಬಿಹ್‌ರೌಲಿ ಮುಂತಾದ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದಾರೆ. ಮೂಲತಃ ಇವರು ಸ್ವಾಭಾವಿಕ ಮಾಂಸಾಹಾರಿ ಗಳು’’ ಎಂದು ಮಧ್ಯಪ್ರದೇಶದ ಕಂತಿ ಜಿಲ್ಲೆಯ ವಿಜಯ್ ರಾಘೋಘರ್ ಅರಣ್ಯವಲಯದ ವಲಯಾಧಿಕಾರಿ ಕೆ.ಪಿ.ತ್ರಿಪಾಟಿ ಹೇಳಿದರು. ‘‘ಅವರು ಈ ಹಿಂದೆ ಸಾಮಾನ್ಯವಾಗಿ ತಿನ್ನುವ ಉದ್ದೇಶದಿಂದ ವನ್ಯಜೀವಿಗಳನ್ನು ಕೊಲ್ಲುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಹುಲಿ ಬೇಟೆಯ ‘ತಜ್ಞ’ರಾಗಿಬಿಟ್ಟಿದ್ದಾರೆ’’ ಎಂದೂ ಸೇರಿಸಿದರು.
ಮಧ್ಯಪ್ರದೇಶದಲ್ಲಿ ಅರಣ್ಯ ಇಲಾಖೆಯ ಪರವಾಗಿ ಪರ್ದಿಗಳಿಗೆ ಸಂಬಂಧಿಸಿದ ಕಳ್ಳ ಶಿಕಾರಿ ಮೊಕದ್ದಮೆಗಳನ್ನು ನೋಡುಕೊಳ್ಳುತ್ತಿ ರುವ ವಕೀಲೆ ಮಂಜುಳ ಶ್ರೀವಾತ್ಸವ ಮಾತನಾ ಡುತ್ತಾ ‘‘ಅವರು ಇವೆಲ್ಲವನ್ನೂ ಮಾಡಿದ್ದಾರೆ..., ಹುಲಿಗಳು, ಚಿರತೆಗಳು, ಕಾಡು ಹಂದಿಗಳನ್ನು ಸಹ ಕೊಂದಿದ್ದಾರೆ. ಇವರು ಅರಣ್ಯ ಇಲಾಖೆಗೆ ಕಠಿಣವಾಗಿದ್ದಾರೆ, ಯಾವಾಗಲೂ ಆಯುಧ ಗಳನ್ನು ಹೊಂದಿರುತ್ತಾರೆ’’ ಎಂದು ಹೇಳಿದರು. ಹಾಗೇ ‘‘ಅವರ ಬಳಿ ಮತದಾರರ ಚೀಟಿಗಳಿವೆ, ಬ್ಯಾಂಕಿನಲ್ಲಿ ಹಣವಿದೆ, ಟೀವಿ-ಕಾರುಗಳು ಸಹ ಇವೆ’’ಎಂದು ಸೇರಿಸಿದರು.
ಆದರೆ ತಜ್ಞರ ಅಭಿಪ್ರಾಯದ ಪ್ರಕಾರ ಅವರಿಗೆ ಶಿಕ್ಷಣದ ಕೊರತೆ ಇದೆ, ಹಾಗೆಯೇ ಸ್ವಭಾವತಃ ಅವರು ಸಂಕೋಚದ, ಹಿಂಜರಿ ಯುವ ಪ್ರವೃತ್ತಿಯವರು. ಹಾಗಾಗಿ ಅವರು ಸುಲಭವಾಗಿ ರಾಜಕಾರಣಿಗಳು ಹಾಗೂ ಮಾಫಿಯಾಗಳ ದಾಳಗಳಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಇವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ. ಇವರು ಬಲೆಗಳ ತಯಾರಿಕೆಯಲ್ಲಿ ಶ್ರೇಷ್ಠರು, ಹಾಗೆಯೇ ಸಣ್ಣ ಪುಟ್ಟ ವ್ಯಾಪಾರ ಮಾಡಬಲ್ಲವರು. ಹಾಗಾಗಿ ದೊಡ್ಡವರನ್ನು ಪರಿವರ್ತಿಸುವ, ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಬುಡಕಟ್ಟು ಮಂತ್ರಾಲಯ ಕೈಗೆತ್ತಿಕೊಂಡಿದೆ ಎಂದು ಪಾಬ್ಲಾ ತಿಳಿಸಿದರು.
ಇದು ಶುದ್ಧಾಂಗ ಪಿಟಿಐ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯ) ವರದಿ. 7ನೆ ಜನ ವರಿ-2008ರಂದು ರಾತ್ರಿ 12 ಗಂಟೆಯಲ್ಲಿ ಇದು ಪಿಟಿಐ ಕಚೇರಿಯಿಂದ ಜಗತ್ತಿನಾದ್ಯಂತ ಇರುವ ತನ್ನ ಸದಸ್ಯ ಪತ್ರಿಕೆಗಳಿಗೆ ರವಾನೆಯಾಯಿತು. ಇಂತಹ ಒಂದು ಪಿಟಿಐ ವರದಿ ದೇಶದ ನೂರಾರು ಪತ್ರಿಕೆಗಳ ಮೂಲಕ ಹೇಗೆ ದೇಶದಾದ್ಯಂತ ಹರಡುತ್ತದೆ ಎಂಬುದನ್ನು ನಿಮಗೆ ವಿವರಿಸಬೇಕಿಲ್ಲ. ಹಾಗೆಯೇ ಇದೊಂದು ಉದಾಹರಣೆ ಮಾತ್ರ. ಇಂತಹ ಒಂದಿಲ್ಲೊಂದು ಸುದ್ದಿ ಈ ದೇಶದ ಅನೇಕ ಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟವಾಗುತ್ತಿರುತ್ತದೆ. ಅದರಲ್ಲೂ 2005ರ ಸಾರಿಸ್ಕಾ ದುರಂತದ ನಂತರ ಉತ್ತರ ಭಾರತದ ಪತ್ರಿಕೆಗಳಿಗೆ ಈ ಆದಿವಾಸಿಗಳು ಬಹುಪಾಲು ದೈನಿಕ ಧಾರಾವಾಹಿಯಾಗಿ ಬಿಟ್ಟಿದ್ದರು. ಇವರ ಬಗ್ಗೆ ಎಷ್ಟೆಲ್ಲಾ ಸುದ್ದಿಗಳನ್ನು ಹೇಗೆಲ್ಲಾ ಬರೆಯಲಾಗಿದೆ ಎಂದರೆ, ಇವನ್ನು ಓದುವ ಯಾವೊಬ್ಬ ಓದುಗನೂ ಪರ್ದಿಗಳನ್ನಾ ಗಲಿ ಇವರ ಉಪ ಪಂಗಡ ಗಳನ್ನಾಗಲಿ ಮನುಷ್ಯರೆಂದು ಭಾವಿಸುವುದು ಸಾಧ್ಯವೇ ಇಲ್ಲ.
ಈ ವರದಿಯಲ್ಲಿ ದೇಶಾಧಿ ದೇಶವೇ ಭಯಾನಕರೆಂದು ನೋಡುತ್ತಿರುವ ಒಂದು ಬುಡ ಕಟ್ಟಿನ ಬಗ್ಗೆ ಕನಿಷ್ಠ ವಿವರ ಗಳಿವೆ. ನಾವು ಇವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗದು. ಒಂದು ಪತ್ರಿಕಾಗೋಷ್ಠಿಯ ವರದಿ ಮಾಡುವ ವರದಿಗಾರ ಇದಕ್ಕಿಂತ ಮುಂದೆ ಹೋಗು ವುದನ್ನು ನಿರೀಕ್ಷಿಸಿದರೆ ಅದು ನಮ್ಮ ತಪ್ಪು. ಹಾಗೂ ಹೀಗೂ ಅವನು ಕಷ್ಟಪಟ್ಟು ಹೋಗಬಲ್ಲನಾದರೆ ಇವರನ್ನು ‘ಕ್ರಿಮಿನಲ್ ಟ್ರೈಬ್’ ಎಂದು ಆಜ್ಞೆ ಹೊರಡಿಸಿದ ಬ್ರಿಟಿಷ್ ಅಧಿಕಾರಿಯ ಹೆಸರು ಹೇಳಬಲ್ಲ. ಮೇಲಿನ ವರದಿಯಲ್ಲೂ ಆ ಪ್ರಯತ್ನವನ್ನು ಮಾಡಲಾಗಿದೆ. ಯಾರೋ, ಎಂದೋ ಒಮ್ಮೆ ಹಾಗೆ ಕರೆದರೆಂ ದರೆ ಮುಗಿಯಿತು. ಹುಲಿ, ಸಿಂಹಗಳ ಹತ್ಯೆ ಯಿಂದ ಮನಸ್ಸನ್ನು ಗಾರು ಮಾಡಿಕೊಂಡ ಆಧುನಿಕನೊಬ್ಬನ ಸಮರ್ಥನೆಗೆ ಇದಕ್ಕಿಂತ ಇನ್ನೇನು ಬೇಕು?
ಹಾಗಾದರೆ ಈ ಪರ್ದಿಗಳು ಯಾರು? ಸರಳವಾಗಿ ಹೇಳುವುದಾದರೆ ಇದೊಂದು ಆದಿಮ ಬುಡಕಟ್ಟು ಸಮುದಾಯ. ಇವರ ಉಪ ಪಂಗಡಗಳನ್ನು ಬಹೇಲಿಯಾ, ಚೀತಾ ಪರ್ದಿ, ಲಾಂಗೊ ಪರ್ದಿ, ಗಾವ್ ಪರ್ದಿ, ಪೈದಿಯಾ, ಪರಾಡಿ, ಪರಿಯಾ, ಫಾನ್ಸ್ ಪರ್ದಿ, ಬೇರದ್ ಪರ್ದಿ, ತಕನ್‌ಕರ್ ಮತ್ತು ತಕಿಯಾ ಇತ್ಯಾದಿಯಾಗಿ ಗುರುತಿಸುತ್ತಾರೆ. ಇನ್ನು ಇವರಿಗೆ ತೀರಾ ಹತ್ತಿರದ ಮತ್ತೊಂದು ಇಂಥದ್ದೇ ಬೇಟೆಗಾರ ಬುಡಕಟ್ಟುಗಳ ಪಟ್ಟಿಯಲ್ಲಿ ಮೊಂಗಿಯಾ, ಚಿಡಿಮಾರ್, ಬವಾಡಿಯಾ ಗಳೂ ಬರುತ್ತಾರೆ. ಸಾಮಾನ್ಯವಾಗಿ ನಮ್ಮ ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳು ಇವರ ನೆಲೆಗಳು. ಪಿಟಿಐ ವರದಿಯ ಬಗ್ಗೆ ನಾವು ಚಕಿತರಾಗಬೇಕಾದ್ದಿಲ್ಲ. ಇದು ಅವರ ವಿಷಯದಲ್ಲಿ ಹೊಸದೇನೂ ಅಲ್ಲ. ಇದು ಪರಂಪರೆಯಿಂದ ಬಂದದ್ದು. ಏಕೆಂದರೆ ಇಂಥದ್ದೊಂದು ಚರ್ಚೆ 1871ರಲ್ಲಿಯೇ ದಾಖಲಾಗಿತ್ತು.
ಮೊದಲ ಬಾರಿಗೆ ಭಾರತವನ್ನಾಳುತ್ತಿದ್ದ ಇಂಗ್ಲಿಷ್ ಗೌರ್ನರ್ ಜನರಲ್ ಉತ್ತರ ಭಾರತದಲ್ಲಿ ಇವರನ್ನು ‘ಕ್ರಿಮಿನಲ್ ಟ್ರೈಬ್ಸ್’ ಎಂದು ಕರೆಯಲು ಆದೇಶಿಸಿದ. 1876ರಲ್ಲಿ ಇದು ಪೂರ್ವ ಭಾರತಕ್ಕೂ ಅನ್ವಯಿಸಲ್ಪಟ್ಟು 1911ರ ಹೊತ್ತಿಗೆ ಅದು ದೇಶವಾಪ್ತಿಯಾಗಿ ಆಚರಣೆಗೆ ಬಂತು. 1924ರ ಹೊತ್ತಿಗೆ ಇದಕ್ಕೆ ಹತ್ತಾರು ತಿದ್ದುಪಡಿಗಳಾದವು.1924ರ ಹೊತ್ತಿಗೆ ದೇಶದ ಒಟ್ಟು ಆದಿವಾಸಿಗಳಲ್ಲಿ ಅಧರ್ಕ್ಕಿಂತ ಹೆಚ್ಚು ಸಮುದಾಯಗಳು ಈ ಪಟ್ಟಿಯಲ್ಲಿ ಸೇರಿಸಲ್ಪಟ್ಟವು. ಸುಮ್ಮನೆ ನೋಡಿ, ಭಾರತದಲ್ಲಿ ಒಟ್ಟಾರೆ 5653 ವಿವಿಧ ಸಮುದಾಯಗಳಿವೆ ಎಂದು ಹೇಳಲಾಗಿದೆ.
ತುಂಬಾ ಉದಾರವಾಗಿ ಸ್ವೀಕರಿಸುವುದಾದರೆ ಇದರಲ್ಲಿ 635 ಆದಿವಾಸಿ ಸಮುದಾಯಗಳಿವೆ. ಇದನ್ನು ಸ್ವಲ್ಪ ನಿಖರವಾಗಿ ವಿಂಗಡಿಸುವುದಾದರೆ 313 ಅಲೆಮಾರಿ ಜನಾಂಗಗಳಿವೆ. ಇದರಲ್ಲಿ 250ಕ್ಕೂ ಹೆಚ್ಚು ಸಮುದಾಯಗಳು ಕ್ರಿಮಿನಲ್ ಗಳಾಗಿದ್ದವು ಎಂದು ಇಂಗ್ಲಿಷರು ಹೇಳಿದ್ದರು. ಇರಲಿ ಬಿಡಿ ಈ ಇತಿಹಾಸದ ಬಗ್ಗೆ ಮಾತಾಡುವುದು ತುಂಬಾ ಇದೆ. ಪ್ರಸ್ತುತ ಭಾರತದ ಸೋಗಲಾಡಿ ಪರಿಸರವಾದ ನಿರ್ಭರವಾಗಿರುವುದೇ ಈ ಇತಿಹಾಸದ ಮೇಲೆ. ಹಾಗಾಗಿ ಚರ್ಚೆ ನಿರಾಸಕ್ತಿಯದಲ್ಲ. ಆದರೂ ಈ ಇತಿಹಾಸದ ಬಗ್ಗೆ ಆಮೇಲೆ ಮಾತನಾಡೋಣ. ಈ ಮೇಲಿನ ಪಿಟಿಐ ವರದಿ ಬಂದ ಸಂದರ್ಭದಲ್ಲಿಯೇ ವಿಕಿಪೀಡಿಯಾದಲ್ಲಿ ಒಂದು ಚರ್ಚೆ ನಡೆಯುತ್ತಿತ್ತು.
ಆ ಚರ್ಚೆ ಆರಂಭವಾಗಿದ್ದು ‘ಫೇಸ್ ಪರ್ದಿ’ ಅಥವಾ ‘ಫಾಸೀ ಪರ್ದಿ’ ಗಳಿಂದ. ಇವರು ಈ ದೇಶದ ಕಾನೂನು ಅನುಷ್ಠಾನಕರಿಂದ ತೀವ್ರ ಹಿಂಸೆಗೀಡಾಗಿದ್ದಾರೆ ಎಂದು ಹೇಳುತ್ತಾ ಅವರ ಬುಡಕಟ್ಟುಗಳ ವಿವಿಧ ಹೆಸರುಗಳನ್ನು ಹೇಳಿ, ಇವರಲ್ಲಿ ಫೇಸ್ ಪರ್ದಿ ಎಂಬ ಒಂದೇ ಬುಡಕಟ್ಟಿನ ಸುಮಾರು 60,000 ಜನರು ಮುಂಬೈನಲ್ಲಿದ್ದಾರೆ. ಇವರಲ್ಲಿ 10,000 ಮಕ್ಕಳು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾರೆ. ಕಷ್ಟುಪಟ್ಟು ಹುಡುಕಿದರೆ ಅಕ್ಷರ ಕಲಿತವರೆಂಬ 3000 ಮಂದಿಯನ್ನು ಪಟ್ಟಿಮಾಡಬಹುದು ಎಂದು ಹೇಳಿತು. ಅದು ಸರಿ, ಇದರಲ್ಲಿ ವಿವಾದಾತ್ಮಕವಾದದ್ದು ಏನಿದೆ? ಏಕೆ ಇದನ್ನು ವಿಕಿಪೀಡಿಯಾ ‘ವಿವಾದಿತ’ ವೆಂದು ಹೇಳಿತು. ಪಿಟಿಐ ವರದಿಯ ಕೊನೆಯಲ್ಲಿ ಅರಣ್ಯಾಧಿಕಾರಿ ಹೆಚ್.ಎಸ್.ಪಾಬ್ಲಾ ಹೇಳಿರುವ ಮಾತುಗಳಿಗೂ ಇದಕ್ಕೂ ಕನಿಷ್ಠ ಸಾಮ್ಯತೆ ಇದೆಯಲ್ಲ. ಆದರೂ ಇದನ್ನು ‘ವಿವಾದಿತ’ ಎಂದು ಸ್ವೀಕರಿಸುವವರು ಯಾರು? ಏಕೆ? ಇದರ ಬೇರುಗಳು ಎಲ್ಲಿವೆ?